ಕನ್ನಡ ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆಗಳಲ್ಲಿ ಆರ್ಥಿಕ ಸಾಕ್ಷರತೆಯ ಪಾಠಗಳನ್ನು ಅಳವಡಿಸಲು ನಿರ್ಧರಿಸಿದೆ.
ಬೆಂಗಳೂರು, ಭಾರತ ಆಗ 22,2026 ALN: ಅದೊಂದು ದಿನ ಬನಶಂಕರಿ ದೇವಸ್ಥಾನದ ಮುಂಭಾಗದ ಫುಟ್‌ಪಾತ್‌ನಲ್ಲಿ ನಡೆದು ಹೋಗುತ್ತಿದ್ದೆ. ಅಲ್ಲೇ ಸೊಪ್ಪು ಮಾರುತ್ತಿದ್ದ ಮಧ್ಯ ವಯಸ್ಕ ಮಹಿಳೆಯೊಬ್ಬರಿಗೂ ಒಬ್ಬಾತನಿಗೂ ಜಗಳ ನಡೆಯುತ್ತಿತ್ತು. ಆಕೆ, ಸಾವಿರ ರೂಪಾಯಿ ಸಾಲದ ಹಣ ವಾಪಸ್ ಮಾಡಲು ತಡ ಮಾಡಿದ್ದರು ಎಂದು ಕಾಣುತ್ತದೆ. ಆತ ಒಂದೇ ಸಮನೆ ಏರು ದನಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ.
ಇನ್ನೊಮ್ಮೆ, ಕರ್ನಾಟಕದ ಖ್ಯಾತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಂದರ್ಶನ ನೋಡುತ್ತಿದ್ದೆ. ಅದರಲ್ಲಿ ಹಣದ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಅವರು, ʼಕ್ರಿಕೆಟಿಗರು ವಯಸ್ಸಲ್ಲದ ವಯಸ್ಸಲ್ಲಿ ದೊಡ್ಡ ಹಣ ನೋಡುತ್ತಾರೆ. ಆದರೆ, ಸೂಕ್ತ ತಿಳಿವಳಿಕೆ ಇಲ್ಲದೆ ಅದನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ. ಸಾಕಷ್ಟು ಹಣ ಗಳಿಸಲು ದಾರಿ ಮಾಡಿಕೊಟ್ಟ ಬಿಸಿಸಿಐ, ಆ ಹಣವನ್ನು ಉಳಿಸುವತ್ತಲೂ ಅವರಿಗೆ ಮಾರ್ಗದರ್ಶನ ನೀಡಬೇಕುʼ ಎಂಬ ದಾಟಿಯಲ್ಲಿ ಮಾತನಾಡಿದ್ದರು.
ಮಗದೊಮ್ಮೆ ಹೀಗೆ ನನ್ನ ಸ್ನೇಹಿತನ ಜೊತೆ ಮಾತನಾಡುವಾಗ, ಊರಿನ ಕೂಲಿ ಕಾರ್ಮಿಕರ ಬಗ್ಗೆ ಮಾತು ತಿರುಗಿತು. ಅವರ ವೇತನದ ಪ್ರಸ್ತಾಪವೂ ನಡೆಯಿತು, ಪಟ್ಟಣದಲ್ಲಿರುವ ಸಾಮಾನ್ಯ ಖಾಸಗಿ ಉದ್ಯೋಗಿಗಳ ದುಡಿಮೆಗೂ, ಹಳ್ಳಿಗಳಲ್ಲೇ ಇರುವ ಕೂಳಿಯಾಳುಗಳ ಗಳಿಕೆಗೂ ಅಂಥಹ ದೊಡ್ಡ ವ್ಯತ್ಯಾಸಗಳೇನೂ ಇಲ್ಲ ಎಂಬ ಸಂಗತಿಯನ್ನು ಇಬ್ಬರೂ ಮನಃಪೂರ್ವಕವಾಗಿ ಒಪ್ಪಿಕೊಂಡೆವು.
ಆದರೆ, ದುಡಿಮೆ ಒಂದೇ ಆಗಿದ್ದರೂ ಊರಿನ ಕೂಲಿಕಾರರು ಯಾಕೆ ಇನ್ನೂ ಅಲ್ಲೇ ಇದ್ದಾರೆ? ಅಲ್ಲೇ ಅಂದರೆ, ಅದೇ ಸಣ್ಣ-ಪುಟ್ಟ ಸಾಲಕ್ಕಾಗಿ ಕೈಯೊಡ್ಡುವುದು, ಅದನ್ನು ತೀರಿಸಲು ಪಡಿಪಾಟಲು ಪಡುವುದು, ಅನಗತ್ಯ ವಿಚಾರಗಳಿಗೆ ಖರ್ಚು ಮಾಡುವುದು. ಹೀಗೆ, ಹಣಕಾಸಿನ ಸಿಕ್ಕಿನಲ್ಲಿ ಯಾಕೆ ಸಿಲುಕಿದ್ದಾರೆ?
ವಿಷಯ ಇಷ್ಟೇ; ಎಲ್ಲಿಯೇ ಇದ್ದರೂ ಹಣಕಾಸಿನ ನಿರ್ವಹಣೆ ಅರಿತಿಲ್ಲದವರ ಬದುಕು ಬಹುತೇಕ ಒಂದೇ ತೆರನಾಗಿ ಇರುತ್ತದೆ. ಇವರೆಲ್ಲ ಬಡವರು ಎನ್ನುವುದು ಮೇಲ್ನೋಟಕ್ಕೆ ಸರಿಯಷ್ಟೆ. ಆದರೆ ಈ ಸಮಸ್ಯೆಗಳಿಗೆಲ್ಲ ಅದುವೇ ಸಮರ್ಥನೆಯಾಗುವುದಿಲ್ಲ.
ಸ್ವಾತಂತ್ರ್ಯ ಬಂದಾಗ ನಮ್ಮ ದೇಶದಲ್ಲಿ ಶಿಕ್ಷಣ ಎನ್ನುವುದು ಸರ್ವವ್ಯಾಪಿಯಾಗಿ ಇರಲಿಲ್ಲ. ಕೇವಲ ಶೇ 12ರಷ್ಟು ಜನರು ಮಾತ್ರ ಸಾಕ್ಷರತೆಯ ಅಳತೆಗೋಲಾದ ಕನಿಷ್ಠ ಒಂದು ಭಾಷೆಯಲ್ಲಿ ಓದಲು ಮತ್ತು ಬರೆಯಲು ಅರಿತಿದ್ದರು. ಆದರೆ ಇಂದು ಶೇ 80ಕ್ಕೂ ಹೆಚ್ಚು ಜನರು ಸಾಕ್ಷರರಾಗಿದ್ದಾರೆ. ಜನರ ಬದುಕಿನಲ್ಲಿ ಒಂದಿಷ್ಟು ಸುಧಾರಣೆಯಾಗಿದೆ. ಇದು ನಿಜ.
ಆದರೆ, ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ನನಸಾಗಲು ಇಷ್ಟೇ ಸಾಕೆ? ನಿಜಕ್ಕೂ ಇಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬರೀ ಅಕ್ಷರ ಜ್ಞಾನವಿದ್ದರೆ ಸಾಲದು, ‘ಆರ್ಥಿಕ ಜ್ಞಾನ’ವೂ ಬೇಕು.
ಇಂದು ಸಮಾಜದಲ್ಲಿ ಒಂದು ವರ್ಗದ ಜನರ ಬದುಕು ನಾಗಾಲೋಟದಲ್ಲಿ ಓಡುತ್ತಿದ್ದರೆ, ಇನ್ನೊಂದು ವರ್ಗದ ಜನರ ಬದುಕು ಅಲ್ಲೇ ಕುಂಟುತ್ತಾ ಸಾಗುತ್ತಿದೆ. ಒಂದಿಷ್ಟು ಜನರು ಯುಪಿಐ, ಕ್ರೆಡಿಟ್ ಕಾರ್ಡ್, ಸಿಬಿಲ್ ಸ್ಕೋರ್, ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ ಅಂತ ಹಣದಿಂದಲೇ ಹಣ ಬೆಳೆಸುತ್ತಿದ್ದಾರೆ. ತಮ್ಮ ಹಣಕಾಸನ್ನು ಯೋಜನಾಬದ್ಧವಾಗಿ ನಿರ್ವಹಿಸುತ್ತಿದ್ದಾರೆ. ಅದರಿಂದಲೇ ಒಂದಿಷ್ಟು ಗೆಲುವು ಕಾಣುತ್ತಿದ್ದಾರೆ.
ಆದರೆ, ಅದೇ ಇನ್ನೊಂದಷ್ಟು ಜನರ ಬಳಿ, ಕನಿಷ್ಠ ಖರ್ಚು-ವೆಚ್ಚದ ಸರಳ ಲೆಕ್ಕಾಚಾರವೂ ಇಲ್ಲ. ಯಾವುದಕ್ಕೆ ಎಷ್ಟು ಹಣ ತೆರುತ್ತಿದ್ದೇವೆ ಎಂಬುದನ್ನೂ ತಿಳಿಯದೆ, ಗಳಿಸಿದ್ದನ್ನೆಲ್ಲ ಖರ್ಚು ಮಾಡುತ್ತಾ ಓತಪ್ರೋತವಾಗಿ ಬದುಕುತ್ತಿದ್ದಾರೆ. ಇದಕ್ಕಿರುವುದು ಒಂದೇ ದಾರಿ ಆರ್ಥಿಕ ಸಾಕ್ಷರತೆ.
ವಿಶ್ವ ಆರ್ಥಿಕ ವೇದಿಕೆಯ ಅಂಕಿ-ಅಂಶಗಳ ಪ್ರಕಾರ, ಮುಂದುವರಿದ ದೇಶಗಳಲ್ಲಿ ಶೇ 52ರಷ್ಟು ಜನರು ಆರ್ಥಿಕ ಸಾಕ್ಷರರಾಗಿದ್ದರೆ, ಭಾರತದಲ್ಲಿ ಈ ಪ್ರಮಾಣ ಕೇವಲ ಶೇ 27ರಷ್ಟಿದೆ. ಅಂದರೆ ಜಾಗತಿಕ ಸರಾಸರಿಯ ಅರ್ಧದಷ್ಟಿದೆ. ಇದು ನಾವಿನ್ನೂ ಬಹುದೂರ ಸಾಗಬೇಕಿದೆ ಎಂಬುದನ್ನು ಹೇಳುತ್ತಿದೆ.
ಇದನ್ನು ಸರಿಪಡಿಸಲು ಇರುವ ಏಕೈಕ ದಾರಿಯೆಂದರೆ ಶಿಕ್ಷಣದ ಜೊತೆಗೇ ಜನರಿಗೆ ‘ಆರ್ಥಿಕ ಶಿಕ್ಷಣ’ ನೀಡುವುದು. ಸ್ವಸಹಾಯ ಸಂಘಗಳು, ಪಿಗ್ಮಿ ಮಾದರಿಗಳು, ಅಂಚೆ ಕಚೇರಿಯ ಆರ್‌ಡಿ ಮೊದಲಾದ ವ್ಯವಸ್ಥೆಗಳು ವಯಸ್ಕರಿಗೆ ಸಣ್ಣ ಮಟ್ಟದಲ್ಲಿ ಹಣಕಾಸು ನಿರ್ವಹಣೆಯನ್ನು ಕಲಿಸಿವೆ ಎಂಬುದೇನೋ ನಿಜ. ಆದರೆ, ಡಿಜಿಟಲ್ ಯುಗದಲ್ಲಿ ಇದಿಷ್ಟೇ ಸಾಲುವುದಿಲ್ಲ. ಮಾತ್ರವಲ್ಲ, ಇದರಾಚೆಗೂ ಅರ್ಥ ಜಗತ್ತಿದೆ. ಜಗತ್ತು ಬದಲಾಗುತ್ತಿದೆ; ಹಿಂದೆಂದಿಗಿಂತಲೂ ವೇಗವಾಗಿ ರೂಪಾಂತರಗೊಳ್ಳುತ್ತಿದೆ.
ಹೀಗಾಗಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ, ಸ್ವಚ್ಛತೆಯ ಪಾಠಗಳ ಜೊತೆ-ಜೊತೆಗೆ ಆರ್ಥಿಕ ನಿರ್ವಹಣೆಯ ಪಾಠವನ್ನೂ ಕಡ್ಡಾಯವಾಗಿ ಸೇರಿಸಬೇಕಾಗಿದೆ.
ಹಾಗಂಥ, ಭಾರತದಲ್ಲಿ ಪ್ರಯತ್ನಗಳೇ ನಡೆದಿಲ್ಲ ಎಂದಲ್ಲ. ಆರ್‌ಬಿಐ, ಸೆಬಿ, ಐಆರ್‌ಡಿಎಐ, ಪಿಎಫ್‌ಆರ್‌ಡಿಎ ಬೆಂಬಲದೊಂದಿಗೆ ಆರಂಭವಾಗಿರುವ ರಾಷ್ಟ್ರೀಯ ಆರ್ಥಿಕ ಶಿಕ್ಷಣ ಕೇಂದ್ರ (ಎನ್‌ಸಿಎಫ್‌ಇ) ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಉಳಿತಾಯ, ಸಾಲ ನಿರ್ವಹಣೆ, ಹೂಡಿಕೆ ಹಾಗೂ ಚಕ್ರಬಡ್ಡಿಯ ಕುರಿತು ಜಾಗೃತಿ ಮೂಡಿಸುತ್ತಿದೆ. ಸಿಬಿಎಸ್‌ಇ ಸಹಯೋಗದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಹಣಕಾಸು ಪಾಠಗಳನ್ನು ಒಳಗೊಂಡ ವರ್ಕ್‌ಬುಕ್‌ಗಳನ್ನು ಸಿದ್ಧಪಡಿಸಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ (ಎನ್‌ಇಪಿ 2020) ಇದನ್ನು ಅಳವಡಿಸಿಕೊಳ್ಳಲಾಗಿದೆ. ಗಣಿತದ ಜೊತೆ ಬಡ್ಡಿ ಲೆಕ್ಕಾಚಾರ, ಸಮಾಜ ವಿಜ್ಞಾನದಲ್ಲಿ ತೆರಿಗೆ ವ್ಯವಸ್ಥೆಯನ್ನು ಬೋಧಿಸುವ ಪ್ರಯತ್ನಗಳಾಗುತ್ತಿವೆ. ಆದರೆ, ಇದು ಐಚ್ಛಿಕವಾಗಿರುವುದರಿಂದ ದೇಶಾದ್ಯಂತ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಅಲ್ಲದೆ, ಇವೆಲ್ಲವೂ ತೀರಾ ಆರಂಭಿಕ ಹಂತದ ಶಿಕ್ಷಣದ ಕತೆಯಾಯಿತು. ತಂತ್ರಜ್ಞಾನದ ಆಸರೆಯಲ್ಲಿ ಇಂದು ಹಣಕಾಸು ಉತ್ಪನ್ನಗಳು ತುಂಬಾ ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿವೆ. ಒಂದು ವರ್ಗದವರಷ್ಟೇ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಉಳಿದವರು ಈ ಆಟವನ್ನು ದೂರದಲ್ಲಿ ನಿಂತು ನೋಡುತ್ತಿದ್ದಾರೆ. ಹೀಗಾಗಿ ಈ ಸರಳ ಸಾಮಾನ್ಯ ಕಲಿಕೆ ಗಮನಾರ್ಹ ಬದಲಾವಣೆಯನ್ನು ತರದು.
ಆರ್ಥಿಕ ಶಿಕ್ಷಣದ ವಿಚಾರಕ್ಕೆ ಬಂದಾಗ ಜಗತ್ತಿನ ಹಲವು ರಾಷ್ಟ್ರಗಳು ಬಹುದೂರ ಸಾಗಿವೆ. ಸಾಮಾನ್ಯ ಬಡ್ಡಿ, ಸಾಲದಾಚೆಗೆ ಷೇರು ಮಾರುಕಟ್ಟೆಯ ಹೂಡಿಕೆಯ ಪಾಠಗಳನ್ನೂ ಶಾಲಾ ಪಠ್ಯಕ್ರಮದಲ್ಲಿ ಕಡ್ಡಾಯಗೊಳಿಸಿವೆ.
ಉದಾಹರಣೆಗೆ ಜಪಾನ್ ಉಳಿತಾಯದ ಪಾಠದ ಜೊತೆಗೆ ಷೇರುಗಳು, ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳ 'ರಿಸ್ಕ್ ಮತ್ತು ರಿವಾರ್ಡ್' ಲೆಕ್ಕಾಚಾರವನ್ನು ಹೈಸ್ಕೂಲ್ ಪಠ್ಯದಲ್ಲೇ ಕಡ್ಡಾಯಗೊಳಿಸಿದೆ. ಅಮೆರಿಕದಲ್ಲಿ, ವಿದ್ಯಾರ್ಥಿಗಳಿಗೆ ವಾಸ್ತವ ಷೇರು ಮಾರುಕಟ್ಟೆಯ ಅನುಭವ ನೀಡಲು ವರ್ಚುವಲ್ 100,000 ಡಾಲರ್ ನೀಡಿ ಆನ್‌ಲೈನ್‌ನಲ್ಲಿ ಟ್ರೇಡಿಂಗ್ ಮಾಡುವ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ.
ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿರುವ ಫಿನ್‌ಲ್ಯಾಂಡ್ ತನ್ನ 'ರಾಷ್ಟ್ರೀಯ ಸಂಪತ್ತಿನ ತಂತ್ರ'ದ ಭಾಗವಾಗಿ, ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ಡಿಜಿಟಲ್ ಫೈನಾನ್ಸ್, ಸೈಬರ್ ಭದ್ರತೆ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಸಂಪತ್ತು ವೃದ್ಧಿಸುವ ಕಲೆಗಳನ್ನು ಹೇಳಿಕೊಡುತ್ತಿದೆ. ಇನ್ನು ಚೀನಾ ದೇಶವೂ ಸಹ ಈ ದಿಸೆಯಲ್ಲಿ ಪ್ರಯತ್ನ ಆರಂಭಿಸಿದ್ದು, ಶಾಂಘೈ-ಶೆನ್‌ಜೆನ್‌ನಂತಹ ವಾಣಿಜ್ಯ ನಗರಗಳಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲೇ ಷೇರು ಮಾರುಕಟ್ಟೆಯ ವಿಶ್ಲೇಷಣೆ ಮತ್ತು ಮಾರುಕಟ್ಟೆಯ ಅಪಾಯಗಳ ಬಗ್ಗೆ ಪಾಠ ಮಾಡುತ್ತಿದೆ.
ಇದನ್ನು ಭಾರತವೂ ಗಮನಿಸಿ ಅಳವಡಿಸಿಕೊಳ್ಳಬೇಕಿದೆ. ಖುಷಿಯ ವಿಚಾರವೆಂದರೆ, ಕರ್ನಾಟಕ ಸರ್ಕಾರ ಈ ಹಾದಿಯಲ್ಲಿ ಈಗಾಗಲೇ ಒಂದು ಆರಂಭಿಕ ಹೆಜ್ಜೆ ಇಟ್ಟಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 956 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ, ಪ್ರೌಢಶಾಲೆ ಮತ್ತು ಪಿಯುಸಿ ಹಂತದ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆಯ ಪಾಠವನ್ನು ಆರಂಭಿಸಲು ನಿರ್ಧರಿಸಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದೆ.
ಶಾಲಾ ಮಕ್ಕಳಿಗೆ ಕೇವಲ ಉಳಿತಾಯ, ಸಾಲ ನಿರ್ವಹಣೆ, ತೆರಿಗೆಯಷ್ಟೇ ಅಲ್ಲದೆ, ಷೇರು ಮಾರುಕಟ್ಟೆ, ಟ್ರೇಡಿಂಗ್ ಮೊದಲಾದ ವಿಚಾರಗಳ ಬಗ್ಗೆಯೂ ತರಬೇತಿ ನೀಡಲು ತೀರ್ಮಾನಿಸಿದೆ. ಇನ್ನೊಂದು ಉತ್ತಮ ಸಂಗತಿ ಎಂದರೆ, ಪುಸ್ತಕದ ಬೋಧನೆಗೆ ಸೀಮಿತವಾಗದೆ, ಬ್ಯಾಂಕ್ ಅಧಿಕಾರಿಗಳು, ಆರ್ಥಿಕ ತಜ್ಞರು ಹಾಗೂ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರಿಂದಲೇ ನೇರವಾಗಿ ಮಾರ್ಗದರ್ಶನ ಚಿಂತನೆ ನಡೆಸಿದೆ. ಇದರ ಜೊತೆಗೆ ವಿದ್ಯಾರ್ಥಿಗಳನ್ನು ಬ್ಯಾಂಕ್‌ಗಳು ಹಾಗೂ ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಖುದ್ದಾಗಿ ಕರೆದೊಯ್ದು ಪ್ರಾಯೋಗಿಕ ಜ್ಞಾನ ನೀಡಲು ಮುಂದಾಗಿದೆ.
ಆದರೆ, ಇದನ್ನು ಪ್ರೌಢಶಾಲೆಗೆ ಸೀಮಿತಗೊಳಿಸುವ ಬದಲು ಪ್ರಾಥಮಿಕ ಹಂತದಿಂದಲೇ ಶುರು ಮಾಡಿದರೆ, ಸ್ಮಾರ್ಟ್‌ಫೋನ್ ಯುಗದಲ್ಲಿ ಹುಟ್ಟಿರುವ ಜೆನ್-ಆಲ್ಫಾ ಮಕ್ಕಳಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಪಾಕೆಟ್ ಮನಿ ನಿರ್ವಹಣೆಯಿಂದ ಶುರುವಾಗಿ, ಷೇರು, ಮ್ಯೂಚುವಲ್ ಫಂಡ್, ಹೂಡಿಕೆ, ಹಣಕಾಸು ನಿರ್ವಹಣೆ, ಡಿಜಿಟಲ್ ಪೇಮೆಂಟ್, ಸೈಬರ್ ವಂಚನೆ ತಡೆಗಟ್ಟುವವರೆಗಿನ ಆರ್ಥಿಕ ಶಿಕ್ಷಣವನ್ನು ಮಕ್ಕಳಿಗೆ ಹಂತ-ಹಂತವಾಗಿ ನೀಡಬೇಕಾಗಿದೆ.
ಶ್ರೀಮಂತರು ಮತ್ತು ಬಡವರ ನಡುವಿನ ಅಂತರ, ಉಳ್ಳವರು-ಇಲ್ಲದವರ ನಡುವಿನ ಕಂದಕವನ್ನು ಕಡಿಮೆ ಮಾಡಲು ಇದು ತುರ್ತಾಗಿ, ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಹಾಗಂತ ಇದರಿಂದ ರಾತ್ರೋರಾತ್ರಿ ಬದಲಾವಣೆಗಳಾಗುತ್ತವೆ ಎಂಬ ಭ್ರಮೆಗಳೂ ಬೇಡ. ಆದರೆ, ಬಡತನವನ್ನು ಹೋಗಲಾಡಿಸಲು, ಸಮಜಾದ ವಿವಿಧ ಸ್ಥರಗಳ ನಡುವಿನ ಅಂತರವನ್ನು ತಗ್ಗಿಸಲು ಇದು ಖಂಡಿತಾ ನೆರವಾಗಲಿದೆ.
ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳದೆ ಯಶಸ್ವಿ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ. ಆರ್ಥಿಕ ಭದ್ರತೆಯೇ ಸುಭದ್ರ ಜೀವನಕ್ಕೆ ಅಡಿಪಾಯ. ಈ ಎಲ್ಲಾ ಹಿನ್ನೆಲೆಗಳಲ್ಲಿ ಇಂದಿನ ಮಕ್ಕಳ ಆರ್ಥಿಕ ಭವಿಷ್ಯವನ್ನು ಉಜ್ವಲಗೊಳಿಸಲು ಹೊರಟಿರುವ ಕರ್ನಾಟಕ ಸರ್ಕಾರದ ಈ ಹೊಸ ಪ್ರಯತ್ನ ಯಶಸ್ವಿಯಾಗಬೇಕು. ಇಡೀ ದೇಶಕ್ಕೆ ಮಾದರಿಯಾಗಬೇಕು.
To learn more about the latest developments in Education News, stay updated with our exclusive reports and analyses on AILensNews.
ಶಿಕ್ಷಣ ಸುಧಾರಣೆಗೆ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಐವರು ಸಚಿವರ ಸಂಪುಟ ಉಪಸಮಿತಿ ರಚಿಸಲ…
ಎನ್‌ಟಿಎ 50 ಸಿಬ್ಬಂದಿಗೆ ಕೊಕ್ ನೀಡಿದ್ದು, 10 ಹುದ್ದೆ ಭರ್ತಿಗೆ ಚಾಲನೆ ನೀಡಿದೆ.
2026ರ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (KSET-2026) ಆನ್‌ಲೈನ್ ಮೂಲಕ…
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ನೇತೃತ್ವದಲ್ಲಿ NEET–PG 2026 ಪರೀಕ್ಷೆಯ ಸಿದ್ಧತೆಯ ಕುರಿ…
ರಾಜ್ಯಮಟ್ಟದ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿ…